ಬೆಂಗಳೂರು : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಎರಡನೆ ಬಾರಿಗೆ ಲೋಕಾಯುಕ್ತ ವಿಶೇಷ ತನಿಖಾ ತಂಡವು (ಎಸ್ಐಟಿ) ಮನವಿ ಸಲ್ಲಿಸಿದೆ.
2007ರಲ್ಲಿ ಅಂದು ಸಿಎಂ ಆಗಿದ್ದಾಗ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ 550 ಎಕರೆ ಭೂಮಿಯನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಕಾನೂನು ಬಾಹಿರವಾಗಿ ಗಣಿ ಗುತ್ತಿಗೆ ಮಂಜೂರಾತಿ ನೀಡಿದ ಆರೋಪದ ಮೇರೆಗೆ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಮುಕ್ತಾಯಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು 20230 ನವೆಂಬರ್ನಲ್ಲಿ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳು ಪತ್ರ ಬರೆದಿದ್ದರು. ಆದರೆ ಈ ಪ್ರಕರಣದಲ್ಲೂ ಸ್ಪಷ್ಟೀಕರಣ ಕೇಳಿದ್ದ ರಾಜ್ಯಪಾಲರು, ಕೊನೆಗೆ ಭಾಷಾ ತೊಡಕಿನ ತಾಂತ್ರಿಕ ಕಾರಣ ನೀಡಿ ಕಡತವನ್ನು ವಾಪಸ್ ಕಳುಹಿಸಿದ್ದರು.
ಇದೀಗ ಈ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಅನುಮತಿ ಪಡೆಯಲು ದೋಷಾರೋಪಟ್ಟಿ ಮಾತ್ರವಲ್ಲದೆ ಕೆಲ ದಾಖಲೆಗಳನ್ನು ಎಸ್ಐಟಿ ಭಾಷಾಂತರಿಸಿದೆ. ರಾಜ್ಯ ಸರಕಾರದ ಇ-ಆಡಳಿತ ಇಲಾಖೆಯ ಅನುವಾದಕರನ್ನು ಬಳಸಿಕೊಂಡು ಸುಮಾರು 5 ಸಾವಿರಕ್ಕೂ ಅಧಿಕ ದಾಖಲೆಗಳನ್ನು ಎಸ್ಐಟಿ ತರ್ಜುಮೆ ಮಾಡಿದೆ. ಈ ಭಾಷಾಂತರ ಕರಡನ್ನು 2 ಬಾರಿ ಖುದ್ದು ಎಸ್ಐಟಿ ಮುಖ್ಯಸ್ಥ ಹಾಗೂ ಎಡಿಜಿಪಿ ಚಂದ್ರಶೇಖರ್ ಪರಿಶೀಲಿಸಿದ್ದಾರೆ. ಕಾಗುಣಿತ ದೋಷ ಕಂಡು ಬಂದಾಗ ಮತ್ತೆ ಕರಡನ್ನು ಎಡಿಜಿಪಿ ಪರಿಷ್ಕರಿಸಿದ್ದರು. ಹೀಗೆ ಸತತ 7 ತಿಂಗಳ ಕಾಲ ಪ್ರತಿ ಪುಟವನ್ನು ತಿದ್ದಿ ರಾಜ್ಯಪಾಲರಿಗೆ ಭಾಷಾಂತರ ವರದಿಯನ್ನು ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.