ಉಡುಪಿ, ಫೆ.26: ಉಡುಪಿ ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಸಹಿತ ವಿವಿಧ ಸಂಸ್ಥೆಗಳಿಂದ ಜನಸಾಮಾನ್ಯರು ಹಾಗೂ ಸಿವಿಲ್ ಇಂಜಿನಯರ್ಗಳು ತಮ್ಮ ವೃತ್ತಿಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿಯೊಂದಿಗೆ ಉಡುಪಿ ನಗರದಲ್ಲಿ ಹೊಸದೊಂದು ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಸ್ವೀತ್ವಕ್ಕೆ ಬಂದಿದೆ ಎಂದು ನೂತನ ಸಂಘದ ಅಧ್ಯಕ್ಷ ಕೆ.ರಾಜನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿವಿಲ್ ಇಂಜಿನಿಯರ್ಗಳು ವೃತ್ತಿಯಲ್ಲಿ ಅನುಭವಿ ಸುತ್ತಿರುವ ತೊಂದರೆಗಳ ವಿರುದ್ಧ ಧ್ವನಿ ಎತ್ತಿ, ಜನಸಾಮಾನ್ಯರಿಗೂ ಇದರಿಂದ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವುದು ತಮ್ಮ ಸಂಘದ ಉದ್ದೇಶವಾಗಿದೆ ಎಂದರು.
ನೂತನ ಸಂಘದ ಉದ್ಘಾಟನೆ ಮಾ.1ರಂದು ಸಂಜೆ 6:30ಕ್ಕೆ ನಗರದ ಹೊಟೇಲ್ ಕಿದಿಯೂರಿನ ಪವನ್ ರೂಫ್ ಟಾಪ್ನಲ್ಲಿ ನಡೆಯಲಿದೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಣಿಪಾಲ ಎಂಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಕಿರಣ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಲಯನ್ಸ್ ಕ್ಲಬ್ನ ಮಾಜಿ ಜಿಲ್ಲಾ ಗವರ್ನರ್ ಆಗಿರುವ ಸಿವಿಲ್ ಇಂಜಿನಿಯರ್ ನೀಲಕಂಠ ಎಂ.ಹೆಗ್ಡೆ ಅವರು ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸುವರು. ಸಂಘದ ಲೋಗೊವನ್ನು ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ ಅನಾವರಣಗೊಳಿಸುವರು.
ಉಡುಪಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನರಾಜ್ ಕೆ.ಎಂ. ಸಂಘವನ್ನು ಉದ್ಘಾಟಿಸಲಿದ್ದು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹಾಗೂ ಉದ್ಯಮಿ ಪ್ರಸಾದ್ರಾಜ್ ಕಾಂಚನ್ ಉಪಸ್ಥಿತರಿರುವರು ಎಂದರು.
ಸಂಘದ ಪದಾಧಿಕಾರಿಗಳು: ಕೆ.ರಾಜನ್ ಅಧ್ಯಕ್ಷತೆಯ ನೂತನ ಉಡುಪಿ ಸಿವಿಲ್ ಇಂಜಿಯರ್ಸ್ ಸಂಘಕ್ಕೆ ಕೆ.ಹರೀಶ್ ಕುಮಾರ್ ಪ್ರಧಾನ ಕಾರ್ಯದರ್ಶಿ, ಭರತ್ ಭೂಷಣ್ ಹಾಗೂಬ ಗಣೇಶ್ ಬೈಲೂರು ಉಪಾಧ್ಯಕ್ಷರು, ಅನಂತೇಶ ಆಚಾರ್ಯ ಜಂಟಿ ಕಾರ್ಯದರ್ಶಿ, ಪಿ.ಲಕ್ಷ್ಮೀನಾರಾಯಣ ಉಪಾಧ್ಯ ಖಜಾಂಚಿ, ಸುಧೀರ್ ಬೀಡು ಸಂಘಟನಾ ಕಾರ್ಯ ದರ್ಶಿ, ಪುನೀತ್ ಕುಮಾರ್ ಹಾಗೂ ಹೇಮಂತ್ ಕುಮಾರ್ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿದ್ದು, 10 ಮಂದಿ ನಿರ್ದೇಶಕರಿರುವರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಹರೀಶ್ ಕುಮಾರ್, ಗಣೇಶ ಬೈಲೂರು, ಪಿ. ಲಕ್ಷ್ಮೀನಾರಾಯಣ ಉಪಾಧ್ಯ, ಪಿಆರ್ಓ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು.