ಸರಜೆವೊ: ಬೋಸ್ನಿಯಾ ಮತ್ತು ಹರ್ಜೆಗೊವಿನಾದ ಸ್ವಾಯತ್ತ ಸೆರ್ಬ್ ಗಣರಾಜ್ಯದ, ರಶ್ಯ ಪರ ಅಧ್ಯಕ್ಷ ಮಿಲೊರಾಡ್ ಡೊಡಿಕ್ಗೆ ಬೋಸ್ನಿಯಾದ ನ್ಯಾಯಾಲಯ 1 ವರ್ಷದ ಜೈಲುಶಿಕ್ಷೆ ವಿಧಿಸಿದೆ.
ಜತೆಗೆ, ಡೊಡಿಕ್ ಅವರ ಪ್ರತ್ಯೇಕತಾವಾದಿ ಕ್ರಮಗಳನ್ನು ಗಮನಿಸಿ 6 ವರ್ಷ ರಾಜಕೀಯದಿಂದ ನಿಷೇಧಿಸಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಡೊಡಿಕ್ ಅವರು ಸೆರ್ಬ್ ಗಣರಾಜ್ಯದಲ್ಲಿ ಶಾಂತಿಯ ಮೇಲ್ವಿಚಾರಣೆ ನಡೆಸುತ್ತಿರುವ ಉನ್ನತ ಅಂತರಾಷ್ಟ್ರೀಯ ಪ್ರತಿನಿಧಿಯ ಸೂಚನೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ತೀರ್ಪು ಪ್ರಕಟವಾದ ಸಂದರ್ಭ ತನ್ನ ವಕೀಲರೊಂದಿಗೆ ನ್ಯಾಯಾಲಯದಲ್ಲಿದ್ದ ಡೊಡಿಕ್ ಯಾವುದೇ ಶಿಕ್ಷೆಯನ್ನು ತಾನು ಪಾಲಿಸುವುದಿಲ್ಲ ಮತ್ತು ಪ್ರತಿಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೋಸ್ನಿಯಾದಲ್ಲಿ ಸೆರ್ಬ್ ನೇತೃತ್ವದ ಭಾಗವನ್ನು ಸೆರ್ಬಿಯಾ ಜತೆ ವಿಲೀನಗೊಳಿಸಬೇಕು ಎಂದು ಡೊಡಿಕ್ ನಿರಂತರ ಪ್ರತಿಪಾದಿಸುತ್ತಿದ್ದಾರೆ. ರಶ್ಯ ಪರ ನಿಲುವು ಹೊಂದಿರುವ ಡೊಡಿಕ್ ವಿರುದ್ಧ ಅಮೆರಿಕ ಮತ್ತು ಬ್ರಿಟನ್ ನಿರ್ಬಂಧ ಜಾರಿಗೊಳಿಸಿವೆ.