ಕೋಲ್ಕತ್ತಾ: ತಮ್ಮ ಕೃಷಿ ಭೂಮಿಗಳು ಸಮುದ್ರಕ್ಕೆ ಸನಿಹವಿರುವುದರಿಂದ, ಅಂತರ್ಜಲದಲ್ಲಿನ ಲವಣಾಂಶಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪಥರ್ ಪ್ರತಿಮ ಬ್ಲಾಕಿನ ಹಲವಾರು ಗ್ರಾಮಗಳಲ್ಲಿನ ವಿವಿಧ ಸ್ವಸಹಾಯ ಗುಂಪುಗಳ ಸದಸ್ಯರು ಮಳೆ ಕೊಯ್ಲಿಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶವು ಹೂಗ್ಲಿ ನದಿಯು ಬಂಗಾಳ ಕೊಲ್ಲಿಯನ್ನು ಸಂಧಿಸುವ ಸುಂದರಬನ್ ನ ಡೆಲ್ಟಾ ಪ್ರಾಂತ್ಯದಲ್ಲಿದೆ.
ಪಥರ್ ಪ್ರತಿಮ ಬ್ಲಾಕಿನ ಹಲವಾರು ಗ್ರಾಮಗಳಲ್ಲಿ ಮಳೆ ಕೊಯ್ಲು ವಿಧಾನದ ಮೂಲಕ ಬೆಳೆ ತೆಗೆಯುವುದು ಸಾಮಾನ್ಯವಾಗಿ ಬದಲಾಗಿರುವುದರಿಂದ, ಕಿಶೋರ್ ನಗರ್ ಗ್ರಾಮದ ನಿವಾಸಿ ಹಾಗೂ ಸ್ವಯಂ ಸೇವಾ ಗುಂಪಿನ ಸದಸ್ಯೆಯಾದ ಶೆಫಾಲಿ ಬೇರಾ ತಮ್ಮ ಕೃಷಿ ಇಳುವರಿಯಿಂದ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶೆಫಾಲಿ ಬೇರಾ, 127.9 ಹೆಕ್ಟೇರ್ ಜಮೀನಿನ ಪೈಕಿ ಗಮನಾರ್ಹ ಪ್ರಮಾಣದ ಜಮೀನು ಲವಣಾಂಶಭರಿತ ನೀರಿನಿಂದ ಹಾನಿಗೊಳಗಾಗಿತ್ತು ಎಂದು ತಿಳಿಸಿದ್ದಾರೆ. ಆದರೆ, ಇದೀಗ ಸರಕಾರೇತರ ಸಂಸ್ಥೆಯೊಂದರ ಮಾರ್ಗದರ್ಶನ ಹಾಗೂ ನೆರವಿನೊಂದಿಗೆ ಹೊಸದಾಗಿ ತೋಡಲಾಗಿರುವ ಕೆರೆಗಳಲ್ಲಿ ಮಳೆ ನೀರನ್ನು ಶೇಖರಿಸುವ ಮೂಲಕ, ಗ್ರಾಮಸ್ಥರು ತಮ್ಮ ಏಕ ಬೆಳೆಯ ಭೂಮಿಯನ್ನು ಬಹು ಬೆಳೆಯ ಭೂಮಿಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪಥರ್ ಪ್ರತಿಮ ಬ್ಲಾಕಿನಲ್ಲಿರುವ ವಿವಿಧ ಸ್ವಸಹಾಯ ಗುಂಪುಗಳಲ್ಲಿರುವ 530 ಮಂದಿ ಮಹಿಳೆಯರ ಪೈಕಿ ಬೇರಾ ಕೂಡಾ ಒಬ್ಬರಾಗಿದ್ದು, ಗ್ರಾಮಸ್ಥರನ್ನು ಮಳೆ ನೀರು ಕೊಯ್ಲಿಗೆ ಉತ್ತೇಜಿಸುತ್ತಿರುವ ಜಾಗತಿಕ ಸರಕಾರೇತರ ಸಂಸ್ಥೆ Water for People ಅಡಿ ಕೆಲಸ ಮಾಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ Water for People ಸರಕಾರೇತರ ಸಂಸ್ಥೆಯ ಪ್ರತಿನಿಧಿಯೊಬ್ಬರು, “ಅಂತರ್ಜಲದಲ್ಲಿನ ಲವಣಾಂಶ ಪ್ರಮಾಣ ಈಗಲೂ ಅಸಹಜವಾಗಿ ಅಧಿಕವಾಗಿದೆ ಎಂಬುದು ಸತ್ಯ. ಆದರೆ, ಲವಣಾಂಶವಿಲ್ಲದ ಮಳೆ ನೀರನ್ನು ಸಂಗ್ರಹಿಸಲು ಹೊಸದಾಗಿ ಕೆರೆಗಳು ಹಾಗೂ ಜಲಮೂಲಗಳನ್ನು ತೋಡಿರುವುದರಿಂದ ಹಾಗೂ ಹಾಲಿ ಕೆರೆಗಳಲ್ಲಿ ಇರುವ ಹೂಳನ್ನು ತೆಗೆಯುತ್ತಿರುವುದರಿಂದ, ಅವಕ್ಕೆ ಹೊಂದಿಕೊಂಡಿರುವ ಕಾಲುವೆಗಳ ಮೂಲಕ ಲವಣಾಂಶಭರಿತ ನೀರು ಕೊಚ್ಚಿ ಹೋಗುತ್ತಿದೆ. ಇನ್ನೆರಡು ವರ್ಷದಲ್ಲಿ ಆ ಜಾಗದಲ್ಲಿ ಹೊಸ ನೀರು ಶೇಖರಣೆಯಾಗಲಿದ್ದು, ವಿವಿಧ ತರಕಾರಿ ಬೆಳೆಗಳು ಹಾಗೂ ಗೋಧಿ ಮತ್ತು ಮತ್ಸ್ಯ ಕೃಷಿಗೂ ಅನುಕೂಲವಾಗಲಿದೆ” ಎಂದು ಹೇಳಿದ್ದಾರೆ.
Ridge and Furrow ಎಂಬ ಹೆಸರಿನ ಈ ಯೋಜನೆಯು ಕಳೆದ ಕೆಲವು ವರ್ಷಗಳಿಂದ ಹಲವಾರು ರೈತ ದಂಪತಿಗಳಿಗೆ ನೆರವು ಒದಗಿಸಿದೆ. ಈ ಮಾದರಿಯನ್ನು ನೀರು ಇಂಗುವಿಕೆಯ ಸುಧಾರಣೆ, ಮಣ್ಣಿನಲ್ಲಿನ ತೇವಾಂಶ ಹೆಚ್ಚಳ, ನೀರಿನ ಅಭಾವವಿರುವ ಪ್ರಾಂತ್ಯಗಳಲ್ಲಿ ಸುಸ್ಥಿರ ಕೃಷಿಗೆ ನೆರವು ನೀಡುವ ಹವಾಮಾನ ಸ್ನೇಹಿ ತಾಂತ್ರಿಕತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು Water for People ಸರಕಾರೇತರ ಸಂಸ್ಥೆಯ ಪ್ರಕಟನೆ ತಿಳಿಸಿದೆ.