ಬೆಂಗಳೂರು : ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳ, ಕೆಪಿಎಸ್ಸಿ ಪರೀಕ್ಷಾ ಗೊಂದಲ, ಬಾಣಂತಿಯರ ಸಾವು, ಉದಯಗಿರಿ ಗಲಭೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ವಿಧಾನ ಮಂಡಲ ಉಭಯ ಸದನಗಳಲ್ಲಿ ಒಗ್ಗಟ್ಟಿನ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ತೀರ್ಮಾನಿಸಿವೆ.
ಬುಧವಾರ ನಗರದ ಖಾಸಗಿ ಹೊಟೇಲ್ನಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಎರಡೂ ಪಕ್ಷಗಳ ಶಾಸಕರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಬಹುದಾದ ವಿಚಾರಗಳು, ಸರಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ರೂಪಿಸಬಹುದಾದ ಹೋರಾಟಗಳ ಕುರಿತು ಸಮಾಲೋಚನೆ ನಡೆಸಿದರು. ಆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಆರ್.ಅಶೋಕ್, ಮೈಕ್ರೋ ಫೈನಾನ್ಸ್ ಗಳ ಹಾವಳಿ ಮಿತಿಮೀರಿದೆ. ಸುಗ್ರೀವಾಜ್ಞೆ ಜಾರಿಗೊಳಿಸಿದ್ದರೂ ಕಿರುಕುಳ ನಿಂತಿಲ್ಲ. ಕೆಪಿಎಸ್ಸಿ ಅಕ್ರಮಗಳು ಯುವಜನರ ಬದುಕಿಗೆ ಸಂಕಷ್ಟ ತಂದಿಟ್ಟಿವೆ ಎಂದು ದೂರಿದರು.
ಹಣವನ್ನು ಕೊಟ್ಟು ಕೆಲಸವನ್ನು ಗಿಟ್ಟಿಸುವ ಕೆಟ್ಟ ಸಂಪ್ರದಾಯಕ್ಕೆ ಸರಕಾರ ನಾಂದಿ ಹಾಡಿದೆ. ಉನ್ನತ ಹುದ್ದೆಗೇರುವ ಕನ್ನಡದ ಪ್ರತಿಭೆಗಳ ಕನಸನ್ನು ಪರೀಕ್ಷಾ ವೈಫಲ್ಯವು ಛಿದ್ರಗೊಳಿಸಿದೆ. ರೈತರ ಆತ್ಮಹತ್ಯೆ, ಬಾಣಂತಿಯರ ಸಾವಿನ ಸರಣಿ ಮುಂದುವರಿದಿದೆ. ಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಹೀಗಾಗಿ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.