ಘಾಝಿಯಾಬಾದ್: ಅತ್ಯಾಚಾರ ಆರೋಪದ ಮೇಲೆ ತನ್ನ ಅಣ್ಣನನ್ನು ಜೈಲುಪಾಲಾಗಿಸಿದ್ದಕ್ಕೆ ಪ್ರತೀಕಾರವಾಗಿ ತಮ್ಮನೊಬ್ಬ ಅತ್ಯಾಚಾರ ಸಂತ್ರಸ್ತೆಯ ಹಿರಿಯ ಸೋದರನನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಶನಿವಾರ ಮಧುಬನ್ ಬಾಪುಧಾಮ್ ನಲ್ಲಿ ನಡೆದಿದೆ.
ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 2023ರಲ್ಲಿ ಆರೋಪಿಯ ಸೋದರನಿಗೆ ನ್ಯಾಯಾಲಯವು 20 ವರ್ಷಗಳ ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಆರೋಪಿಯು ಅತ್ಯಾಚಾರ ಸಂತ್ರಸ್ತೆಯ ಹಿರಿಯ ಸೋದರನನ್ನು ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ಶನಿವಾರ ಮಧುಬನ್ ಬಾಪುಧಾಮ್ ನಲ್ಲಿ ತಲೆ ಜಜ್ಜಿದ ಸ್ಥಿತಿಯಲ್ಲಿದ್ದ ಮೃತದೇಹವು ಪೊದೆಗಳೊಳಗೆ ಪತ್ತೆಯಾಗಿದೆ.
ಈ ಹತ್ಯೆಯ ಸಂಬಂಧ ಸರ್ಫರಾಜ್ ಎಂಬ ಗುತ್ತಿಗೆದಾರನನ್ನು ಸೋಮವಾರ ರಾತ್ರಿ ರಾಯಿಸ್ಪುರ್ ನಿಂದ ಬಂಧಿಸಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ನನ್ನ ಸೋದರನನ್ನು ಜೈಲುಪಾಲಾಗಿಸಿದ್ದಕ್ಕೆ ಪ್ರತೀಕಾರವಾಗಿ ಹತ್ಯೆಗೈದಿರುವುದಾಗಿ ಆರೋಪಿ ಸರ್ಫರಾಜ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ನಗರ ಪೊಲೀಸ್ ಉಪ ಆಯುಕ್ತ ರಾಜೇಶ್ ಕುಮಾರ್ ತಿಳಿಸಿದ್ದಾರೆ.
2023ರ ಮಧ್ಯ ಭಾಗದಲ್ಲಿ ಮೃತ ಯುವಕನ ಕಿರಿಯ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಮನು ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆತನಿಗೆ ಜೈಲು ಶಿಕ್ಷೆ ವಿಧಿಸಿತ್ತು.
ಹೀಗಾಗಿ, ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಮೇಲೆ ತೀವ್ರ ಹಗೆತನ ಬೆಳೆಸಿಕೊಂಡಿದ್ದ ಸರ್ಫರಾಜ್, ಕೆಲ ವಾರಗಳ ಹಿಂದೆ, ಅತ್ಯಾಚಾರ ಸಂತ್ರಸ್ತೆಯ ಸೋದರನೊಂದಿಗೆ ಹಿಂದಿನದೆಲ್ಲ ಮರೆತು ಬಿಡುವ ಸೋಗಿನೊಂದಿಗೆ ರಾಜಿ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ನಂತರ, ಫೆಬ್ರವರಿ 22ರಂದು ಆತನಿಗೆ ಮದ್ಯ ಕುಡಿಸಿರುವ ಸರ್ಫರಾಜ್, ಆತನನ್ನು ಪುಸಲಾಯಿಸಿ ಕಮಲಾ ನೆಹರೂ ನಗರದಲ್ಲಿನ ಅರಣ್ಯ ಪ್ರದೇಶವೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ದಾರಿ ಮಧ್ಯೆ ಸಿಕ್ಕಿರುವ ಕಲ್ಲಿನಿಂದ ಆತನ ಮೇಲೆ ದಾಳಿ ನಡೆಸಿರುವ ಸರ್ಫರಾಜ್, ಹಲವಾರು ಬಾರಿ ಆತನ ತಲೆಯನ್ನು ಕಲ್ಲಿನಿಂದ ಜಜ್ಜಿದ್ದಾನೆ. ಆತ ಮೃತಪಟ್ಟಿರುವುದು ಖಚಿತಗೊಂಡ ನಂತರ, ಆತನ ಮೃತದೇಹವನ್ನು ಬಳಿಯಲ್ಲೇ ಇದ್ದ ಪೊದೆಯೊಳಕ್ಕೆ ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.