ಶಿವಮೊಗ್ಗ : ಮಹಿಳೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರಿಗೆ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಫೆ.24ರಂದು ತೀರ್ಪು ನೀಡಿದೆ.
ಸಾಗರ ಪಟ್ಟಣದ ನಿವಾಸಿಗಳಾದ ಅರುಣ ಯಾನೆ ಗೆಂಡೆ ಅರುಣ್ (27), ಅಭಿಜಿತ್ (28) ಹಾಗೂ ಇರ್ಫಾನ್ (20) ಆರೋಪಿಗಳಾಗಿದ್ದು, ತಲಾ 10,000 ರೂ. ದಂಡ ವಿಧಿಸಲಾಗಿದೆ.
ನ್ಯಾಯಾಧೀಶೆ ಪ್ರಭಾವತಿ ಅವರು ಈ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಅಣ್ಣಪ್ಪ ನಾಯಕ್ ಜಿ. ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: 2020ರ ಆಗಸ್ಟ್ 12ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ, ಸಿರವಂತೆ ಗ್ರಾಮದ ನಿವಾಸಿಯಾದ 44 ವರ್ಷದ ಮಹಿಳೆಯೋರ್ವರನ್ನು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿತ್ತು. ಅವರ ಬಳಿಯಿದ್ದ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಮೃತರ ತಾಯಿ ನೀಡಿದ ದೂರಿನ ಮೇರೆಗೆ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ ಮೂವರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ದಾಖಲಿಸಿದ್ದರು.